ಚಳ್ಳಕೆರೆ: ನಗರದ ನಗರಸಭೆ ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ಸಾರ್ವಜನಿಕ ಎರಡನೇ ಹಂತದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಿದರು

ಪ್ರತಿ ವರ್ಷ ಆಯವ್ಯಯ ಸಭೆಗೆ ಸಾರ್ವಜನಿಕರಿಂದ ಅನೇಕ ಸಲಹೆ ಸೂಚನೆ ಪಡೆಯುತ್ತೀರಿ. ಅವುಗಳಲ್ಲಿ ಒಂದಾದರೂ ಅನುಷ್ಠಾನಕ್ಕೆ ಬರುವುದಿಲ್ಲ. ಪ್ರತಿ ವರ್ಷವೂ ಹಳೆಯ ಸಮಸ್ಯೆಗಳೇ ಹೊಸ ಸಮಸ್ಯೆಗಳಾಗಿ ಪರಿವರ್ತನೆ ಆಗುತ್ತಿವೆ ಎಂದು ಅಧಿಕಾರಿಗಳನ್ನು ನಗರ ಸಭೆ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ನಗರಸಭೆ ಸದಸ್ಯೆ ಜಯಲಕ್ಷ್ಮಿ ಮಾತನಾಡಿ ನಗರದಲ್ಲಿ ಫುಟ್ಬಾತ್ ಗಳ ಒತ್ತುವರಿಯಿಂದಾಗಿ ಪಾದಚಾರಿಗಳು ರಸ್ತೆಯಲ್ಲಿ ಸಂಚಾರ ಮಾಡುವಂತೆ ಆಗಿದೆ ಇದಕ್ಕೆ ಅಧಿಕಾರಿಗಳು ಯಾವಾಗ ಕಡಿವಾಣ ಹಾಕುತ್ತೀರಿ ಅಲ್ಲದೆ ನಗರಸಭೆಯ ಎಲ್ಲಾ ವಾರ್ಡ್ ಗಳ ಪಾರ್ಕ್ ಗಳು ಅವ್ಯವಸ್ಥೆಯ ತಾಣಗಳಾಗಿದ್ದು ಶುಚಿತ್ವ ಕಾಪಾಡುವಲ್ಲಿ ನಿರ್ಲಕ್ಷ ತೋರಲಾಗುತ್ತಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಮಾಜಿ ನಗರಸಭೆ ಸದಸ್ಯೆ ಶಂಷಾದ್ ಭಾನು ಮಾತನಾಡಿ ನಗರದಲ್ಲಿ ಸ್ಮಶಾನಗಳು ಒತ್ತುವರಿಯಾಗುತ್ತಿದ್ದು ಸ್ವಚ್ಛತೆ ಇಲ್ಲದೆ ಇರುವುದರಿಂದ ಅಂತ್ಯಸಂಸ್ಕಾರ ನಡೆಸಲು ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ ಕೂಡಲೇ ಸ್ಮಶಾನ ಭೂಮಿಗಳನ್ನು ಹೊಸದಾಗಿ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಪೌರಾಯುಕ್ತ ಚಂದ್ರಪ್ಪ ಈಗಾಗಲೇ ನಗರಸಭೆ ವತಿಯಿಂದ ನಗರದ ವಿವಿಧ ಕಡೆಗಳಲ್ಲಿ 10 ಎಕರೆ ಜಾಗ ಗುರುತಿಸಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಂಪೌಂಡ್ ನಿರ್ಮಿಸಿ ಮೂಲಭೂತ ಸೌಕರ್ಯಗಳ ಒದಗಿಸುವ ಮೂಲಕ ಸ್ಮಶಾನ ಭೂಮಿಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರದ ನಿವಾಸಿಯಾದ ರಾಜಶೇಖರಪ್ಪ ಮಾತನಾಡಿ ಹೊಸದುರ್ಗ ನಗರ ಸಭೆಯು ಎರಡು ಬಾರಿ ಸ್ವಚ್ಛ ನಗರ ಎಂಬ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿದ್ದು ಚಳ್ಳಕೆರೆ ನಗರಸಭೆಯು ಒಂದು ಬಾರಿಯಾದರೂ ಇಂತಹ ಪ್ರಶಸ್ತಿಯನ್ನು ಪಡೆಯುವಲ್ಲಿ ವಿಫಲವಾಗಿದೆ ಅಂದರೆ ನಗರದಲ್ಲಿ ಯಾವ ರೀತಿ ಸ್ವಚ್ಛತೆ ಕಾಪಾಡುತ್ತಿದ್ದಾರೆ ಎಂಬುದು ಇದರ ಮೂಲಕ ತಿಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ನಾಗರಿಕ ಪರಸಪ್ಪ ಮಾತನಾಡಿ ಪಾವಗಡ ರಸ್ತೆ ಅಗಲೀಕರಣದ ಸಮಸ್ಯೆ ನ್ಯಾಯಾಲಯದಲ್ಲಿದ್ದು ಇದರಿಂದಾಗಿ ನಗರದ ಅಭಿವೃದ್ಧಿಗೆ ಮಾರಕವಾಗಿದೆ ಕೂಡಲೇ ವಕೀಲರನ್ನು ನಗರಸಭೆ ಅಧಿಕಾರಿಗಳು ಸಂಪರ್ಕಿಸಿ ಪ್ರಕರಣವನ್ನು ತ್ವರಿತ ಗತಿಯಲ್ಲಿ ಇತ್ಯರ್ಥಪಡಿಸಲು ಮನವಿ ಮಾಡಬೇಕು ಎಂದರು.

ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ ಮಾತನಾಡಿ ತಾಲೂಕಿನ ಪತ್ರಕರ್ತರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪತ್ರಕರ್ತರಿಗೆ ನಗರಸಭೆ ವತಿಯಿಂದ ಬರಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಪೌರಾಯುಕ್ತರಿಗೆ ಒತ್ತಾಯಿಸಿದರು.

ನಗರ ಸಭೆ ಸದಸ್ಯರುಗಳ ಗೈರು: ತಾಲೂಕಿನ ಕುರುಡಿಹಳ್ಳಿ ದೊಡ್ಡ ಉಳ್ಳಾರ್ತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿವಿಧ ದೇವರುಗಳ ಜಾತ್ರೆ ಪ್ರಯುಕ್ತ ನಗರಸಭೆ ಸದಸ್ಯರುಗಳು ಗೈರು ಹಾಜರಾತಿಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆದಿದ್ದು ಖಾಲಿ ಕುರ್ಚಿಗಳ ದರ್ಶನ ಎದ್ದು ಕಾಣುತ್ತಿತ್ತು ಹೀಗಾಗಿ ಸಾರ್ವಜನಿಕರ ವಲಯದಲ್ಲಿ ಬಹು ಚರ್ಚೆ ವಿಷಯವಾಗಿ ಮಾರ್ಪಟ್ಟಿತು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಮಂಜುಳ ಪೌರಾಯುಕ್ತ ಚಂದ್ರಪ್ಪ ವೀರಭದ್ರಯ್ಯ ಸುಮ ಬರಮಯ್ಯ ಜಯಲಕ್ಷ್ಮಿ ಸೇರಿದಂತೆ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು

Namma Challakere Local News
error: Content is protected !!