ಚಿತ್ರದುರ್ಗ : ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೇಲ್ದರ್ಜೆಗೇರಿಸುವ ಕಾರ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಭೇಟಿ ನೀಡಿ, ಕಾಮಗಾರಿ ಸ್ಥಳ ವೀಕ್ಷಿಸಿ ಮಾತನಾಡಿ, ಚಿತ್ರದುರ್ಗ, ಚಳ್ಳಕೆರೆ ಹಾಗೂ ಚಿಕ್ಕಜಾಜೂರು ರೈಲು ನಿಲ್ದಾಣಗಳನ್ನು ಅಮೃತ್ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಅಂದಾಜು 116 ಕೋಟಿ ವೆಚ್ಚಕ್ಕೆ ಟೆಂಡರ್ ಕರೆಯಲಾಗಿದೆ’ ಎಂದರು. ಚಿತ್ರದುರ್ಗ ರೈಲು ನಿಲ್ದಾಣದಲ್ಲಿ ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆಯ ಕಾಮಗಾರಿ ಹೊರತುಪಡಿಸಿ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೂಲ ಸೌಕರ್ಯ ಹಾಗೂ ಆಡಳಿತಾತ್ಮಕ ಕಚೇರಿ ನಿರ್ಮಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣ ನಿರ್ಮಿಸಲಾಗುವುದು’ ಎಂದು ತಿಳಿಸಿದರು.