ಚಿತ್ರದುರ್ಗ: ನಗರದ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ರಕ್ತಹೀನತೆ (ಅನಿಮೀಯ) ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಭರತ್ ಕುಮಾರ್ ಎಂ ಮಾತನಾಡಿ, ಕೆಂಪು ರಕ್ತಕಣಗಳ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ನಾವು ನಮ್ಮ ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ರಕ್ತಹೀನತೆಯನ್ನು ನಿವಾರಿಸಬಹುದು. ಸತ್ವಯುತ ಆಹಾರ ನಮ್ಮನ್ನು ಕ್ರಿಯಾಶೀಲರನ್ನಾಗಿಡುವುದರ ಜೊತೆಗೆ ನಮ್ಮ ದೇಹಕ್ಕೆ ಬಲ ನೀಡುತ್ತದೆ. ರಕ್ತಹೀನತೆಯನ್ನು ಪತ್ತೆ ಹಚ್ಚಲು ಹಲವಾರು ಪದ್ಧತಿಗಳಿದ್ದು, ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಾಯದೊಂದಿಗೆ ಆಪ್ ಮೂಲಕ ಹಿಮೋಗ್ಲೋಬಿನ್ ಮಟ್ಟ ತಿಳಿದುಕೊಳ್ಳಬಹುದಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆ ತನ್ನ ಪ್ರಭಾವ ಬೀರಲಿದೆ. ನಮ್ಮ ಸಂಸ್ಥೆಯಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.