ಕಾನೂನು ಬಾಹಿರ ಹಾಗೂ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬೇಡಿ- ಹಾಲಪ್ಪ ಆಚಾರ್ ತಾಕೀತು
ಚಿತ್ರದುರ್ಗ (ಚಳ್ಳಕೆರೆ) :
ಜಿಲ್ಲೆಯಲ್ಲಿ ವಾಮಮಾರ್ಗದಲ್ಲಿ ಕಾನೂನು ಬಾಹಿರವಾಗಿ ಯಾವುದೇ ಗಣಿಗಾರಿಕೆಯಾಗಲಿ, ಮರಳು ಸಾಗಾಣಿಕೆಯಾಗಲಿ ಜರುಗಬಾರದು, ಅಕ್ರಮ ಗಣಿಗಾರಿಕೆ ನಿಯಂತ್ರಿಸಲು ಅಗತ್ಯವಿರುವ ಎಲ್ಲ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಲ್ಲು ಒಡೆದು, ಬದುಕು ಸಾಗಿಸುವ ವೃತ್ತಿಪರರಿಗೆ ಬ್ಲಾಕ್ ಗಳನ್ನು ಗುರುತಿಸಿ, ಅಂತಹವರಿಗೆ ಅವಕಾಶ ಕಲ್ಪಿಸಲು ನಿಯಮ ರೂಪಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಸಣ್ಣಪುಟ್ಟ ವೃತ್ತಿಪರವಾಗಿ ಕಲ್ಲು ಒಡೆಯುವ ಕೆಲಸ ಮಾಡುವವರಿಗೆ ಕೇಸ್ ಹಾಕಿ ತೊಂದರೆ ಮಾಡುತ್ತಾರೆ. ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಹಾಲಪ್ಪ ಆಚಾರ್ ಅವರು, ತಿಂಗಳ ಒಳಗಾಗಿ ಕಲ್ಲುಒಡೆದು ಬದುಕು ನಡೆಸುವ ವೃತ್ತಿಪರರಿಗೆ ಬ್ಲಾಕ್ಗಳನ್ನು ಆಯ್ಕೆ ಮಾಡಿಕೊಟ್ಟು ಅವಕಾಶ ಕೊಡಬೇಕು. ಬಡವರಿಗೆ ತೊಂದರೆ ಕೊಡಬೇಡಿ, ಮಾನವೀಯ ದೃಷ್ಟಿಯಿಂದ ಕೆಲಸ ಮಾಡಬೇಕು, ಅದೇ ರೀತಿ ಕಾನೂನು ಚೌಕಟ್ಟು ಮೀರಿ ಅಧಿಕಾರಿಗಳು ಕೆಲಸ ಮಾಡಬಾರದು ಎಂದು ಸೂಚನೆ ನೀಡಿದರು.
ವಾಮಮಾರ್ಗದಲ್ಲಿ ಕಾನೂನು ಬಾಹಿರವಾಗಿ ಗಣಿಗಾರಿಕೆ ಉತ್ಪನ್ನ ಆಗದಂತೆ ಅಥವಾ ಮರಳು ಗಣಿಗಾರಿಕೆಯಾದಂತೆ ತಡೆಗಟ್ಟುವ ಸಲುವಾಗಿ ಚೆಕ್ಪೋಸ್ಟ್ಗಳ ಸ್ಥಾಪನೆ, ವಾಹನಗಳಿಗೆ ಜಿಪಿಎಸ್ ಅಳವಡಿಕೆ ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಗಣಿಗಾರಿಕೆ ನಿರ್ವಹಣೆಗೆ ಕಂದಾಯ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿಯನ್ನು ರಚಿಸಿ, ಅಧಿಕಾರ ನೀಡಲಾಗಿದೆ. ಸಮಿತಿ ಪ್ರತಿತಿಂಗಳು ಸಭೆ ನಡೆಸಬೇಕು, ನಿಯಮಾನುಸಾರ ಕಾನೂನು ಬದ್ಧವಾಗಿ ಅರ್ಹರಿಗೆ ಗಣಿಗಾರಿಕೆಗೆ ನಡೆಸಲು ಅವಕಾಶ ಒದಗಿಸಬೇಕು. ಆದರೆ ಪರಿಸರವನ್ನು ಹಾಳುಮಾಡಿ ಅಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು. ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿದರೆ, ಅಕ್ರಮ ಗಣಿಗಾರಿಕೆ ತಡೆಯುವುದು ಕಷ್ಟದ ಕೆಲಸವೇನೂ ಅಲ್ಲ. ಆಯಾ ಭಾಗದ ಸಮಸ್ಯೆಗಳು, ಆಯಾ ಪ್ರದೇಶದ ಜನಪ್ರತಿನಿಧಿಗಳಿಗೆ ತಿಳಿದಿರುತ್ತದೆ. ಹೀಗಾಗಿ ಅಧಿಕಾರಿಗಳು ಆಯಾ ಶಾಸಕರುಗಳ ಸಲಹೆಗಳನ್ನು ಪಡೆದುಕೊಳ್ಳಬೇಕು. ಅಕ್ರಮ ಗಣಿಗಾರಿಕೆ ತಡೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಮಂತ್ರಾಲಯವು ಕಳೆದ 2021 ರಲ್ಲಿ ಚಿತ್ರದುರ್ಗ ತಾಲ್ಲೂಕು ಜೋಗಿಮಟ್ಟಿ ಪರಿಸರ ಸೂಕ್ಷ್ಮ ವಲಯದ ಗಡಿಯಿಂದ 575 ಮೀ. ನಿಂದ 01 ಕಿ.ಮೀ. ವರೆಗೆ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಅದರಂತೆ ಈ ಗಡಿಯಿಂದ 1 ಕಿ.ಮೀ. ವ್ಯಾಪ್ತಿ ಹೊರಡುಪಡಿಸಿ ಉಳಿದ ಕಲ್ಲು ಗಣಿ ಗುತ್ತಿಗೆಗಳಿಗೆ ಪರವಾನಿಗೆ ವಿತರಿಸಲಾಗುತ್ತಿದೆ. ಹೊಸ ಮರಳು ನೀತಿಯಂತೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಒಟ್ಟು 26 ಮರಳೂ ನಿಕ್ಷೇಪಗಳನ್ನು ಗುರುತಿಸಿ, ಅಧಿಸೂಚನೆ ಹೊರಡಿಸಿ, ಗ್ರಾ.ಪಂ. ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಾಂಜಿ ನಾಯಕ್ ಸಭೆಗೆ ಮಾಹಿತಿ ನೀಡಿದರು. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ಗಣಿಗಾರಿಕೆಗೆ ಸಂಬAಧಿಸಿದAತೆ ನಿರಾಕ್ಷೇಪಣಾ ಪತ್ರವನ್ನು ನೀಡುವ ಸಂದರ್ಭದಲ್ಲಿ ದಾಖಲೆ ತಿದ್ದಲಾಗಿದೆ, ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು, ವೃತ್ತಿಪರರನ್ನು ಒಕ್ಕಲೆಬ್ಬಿಸಿ, ಕಂಪನಿಗಳಿಗೆ ಲೀಜ್ಗೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು. ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಒಂದು ವೇಳೆ ಅಧಿಕಾರಿಗಳು ತಪ್ಪೆಸಗಿರುವುದು ಕಂಡುಬAದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, ನಿರಾಕ್ಷೇಪಣೆ ಪತ್ರ ನೀಡುವಾಗ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಅನಗತ್ಯವಾಗಿ ವಿಳಂಬ ಮಾಡಬಾರದು ಎಂದು ಸೂಚನೆ ನೀಡಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಗಣಿಗಾರಿಕೆ ಪ್ರದೇಶ ವ್ಯಾಪ್ತಿ ಇದೆ. ಹಳ್ಳಿಗಳಲ್ಲಿ ಬಡವರು ತಮ್ಮ ಮನೆ ಕಟ್ಟಿಕೊಳ್ಳಲು ಎತ್ತಿನಗಾಡಿಯಲ್ಲಿ ಮರಳು ಸಾಗಿಸಿದರೆ, ಪೊಲೀಸ್ ಕೇಸ್ ಹಾಕಿ, ತೊಂದರೆ ಕೊಡುತ್ತಾರೆ, ಆದರೆ ದೊಡ್ಡ ದೊಡ್ಡ ಕಂಪನಿಗಳು ಅಕ್ರಮ ಎಸಗಿದರೂ ಅಧಿಕಾರಿಗಳು ಸುಮ್ಮನಿರುತ್ತಾರೆ, ದೂರವಾಣಿ ಕರೆ ಮಾಡಿ, ಮಾಹಿತಿ ನೀಡುವಂತೆ ತಿಳಿಸಿದರೂ ಸ್ಪಂದಿಸುವುದಿಲ್ಲ, ಈ ರೀತಿ ಅಧಿಕಾರಿಗಳು ಉಡಾಫೆಯಾಗಿ ವರ್ತಿಸಿದರೆ ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹಾಲಪ್ಪ ಆಚಾರ್ ಅವರು ಬಡವರು ಮನೆಗಳನ್ನು ನಿರ್ಮಿಸಿಕೊಳ್ಳಲು ಎತ್ತಿನಗಾಡಿಯಲ್ಲಿ ಮರಳು ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧವಿಲ್ಲ, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದರೆ, ಗಂಭೀರವಾಗಿ ಪರಿಗಣಿಸಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ ಕೆ. ಪೂರ್ಣಿಮ ಶ್ರೀನಿವಾಸ್, ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಬಿ. ಚಂದ್ರಪ್ಪ, ಚಳ್ಳಕೆರೆ ಶಾಸಕ ರಘುಮೂರ್ತಿ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ರಮೇಶ್, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿ.ಪಂ. ಸಿಇಒ ಡಾ. ನಂದಿನಿದೇವಿ, ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.