ಚಿತ್ರದುರ್ಗ : ಸಂಯೋಜಿತ ಸಮಗ್ರ ಕೃಷಿ ಪದ್ಧತಿ ಹಾಗೂ ಸಾವಯವ ಬೇಸಾಯ ಅಳವಡಿಕೆಯಿಂದ ಉತ್ತಮ ಆದಾಯ ದೊರೆತು ರೈತರಿಗೆ ಶಾಶ್ವತ ಆರ್ಥಿಕ ಭದ್ರತೆ ಸಿಗಲಿದ್ದು, ರೈತರು ಈ ನಿಟ್ಟಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಕೆಗೆ ಮುಂದಾಗಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ದೊಡ್ಡ ಸಿದ್ದವನಹಳ್ಳಿ ಗ್ರಾಮದ ಜ್ಞಾನೇಶ್ ಅವರ ಸಾವಯವ ಹಾಗೂ ಸಮಗ್ರ ಕೃಷಿ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೃಷಿಕರ ಅಭಿಪ್ರಾಯ ಆಲಿಸಿದ ನಂತರ ಸಚಿವರು ಮಾತನಾಡಿದರು.
ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸಮಸ್ಯೆ ಇರುವ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ದೇಸಿ ಹೆಸರಿನಲ್ಲಿ ಸಾವಯವ ಉತ್ಪನ್ನಗಳ ಬ್ರಾಂಡ್ ಸೃಷ್ಟಿಸಿ ಉತ್ತಮ ಬೇಡಿಕೆ ಪಡೆದಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಸಿದರು. ಚಿತ್ರದುರ್ಗ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ. ರೈತರು ಆತ್ಮವಿಶ್ವಾಸ ಕಳೆದುಕೊಳ್ಳದೆ ಬದುಕು ಗಟ್ಟಿಗೊಳಿಸಬೇಕು. ತಾವು ಕೃಷಿ ಸಚಿವರಾದ ನಂತರ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಗ್ರಾಮದಿಂದಲೇ ಮೊದಲ ಬಾರಿಗೆ ತಮ್ಮ ಜಿಲ್ಲಾ ಪ್ರವಾಸ, ಸಂವಾದ ಕಾರ್ಯಕ್ರಮ ಪ್ರಾರಂಭಿಸುತ್ತಿರುವುದು ಸ್ಮರಣೀಯ. ಹಿಂದಿನ ರಾಜಕಾರಣವೇ ಬೇರೆ, ಈಗಿನ ರಾಜಕೀಯವೇ ಬೇರೆ. ಆದರೆ ನಿಜಲಿಂಗಪ್ಪನವರ ಬದುಕು ಎಲ್ಲರಿಗೂ ಅನುಕರಣೀಯ ಎಂದು ಅವರು ಸ್ಮರಿಸಿದರು.
ಸಾವಯವ ಕೃಷಿಯಲ್ಲಿ ಸಾರ್ಥಕ ಬದುಕು ಕಟ್ಟಿಕೊಂಡಿರುವ ಕೃಷಿಕ ಜ್ಞಾನೇಶ್ ಎಲ್ಲರಿಗೂ ಪ್ರೇರಣಾ ಶಕ್ತಿ ಹಾಗೂ ಆದರ್ಶವಾಗಿದ್ದಾರೆ ಎಂದರು. ಸಮಗ್ರ ಕೃಷಿ ಪದ್ಧತಿಯು ದೊಡ್ಡ ದೊಡ್ಡ ಹಿಡುವಳಿದಾರರಿಗೆ ಸೂಕ್ತವಲ್ಲ, ಇದೇನಿದ್ದರೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸೂಕ್ತವಾದುದು. ಯಾರು ಕಡಿಮೆ ಕೃಷಿ ಭೂಮಿ ಹೊಂದಿರುತ್ತಾರೆಯೋ ಅಂತಹ ರೈತರಿಗೆ ಸಮಗ್ರ ಕೃಷಿ ಪದ್ಧತಿ ಶಾಶ್ವತ ಆದಾಯ ತರಲಿದೆ. ಕೆಲವೊಮ್ಮೆ ತರಕಾರಿ ಬೆಳೆಗಳಿಗೆ ಉತ್ತಮ ಬೆಲೆ ದೊರೆತು ಒಳ್ಳೆಯ ಲಾಭ ಗಳಿಸಿದರೆ, ಇನ್ನೊಮ್ಮೆ ಮಾಡಿದ ಖರ್ಚು ಕೂಡ ದೊರೆಯದ ಪರಿಸ್ಥಿತಿ ಉಂಟಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯ ನಡುವೆಯೂ ಜ್ಞಾನೇಶ ಅವರು ಗುಣಮಟ್ಟಕ್ಕೆ ಹಾಗೂ ಸಾವಯವ ಕೃಷಿಗೆ ಆದ್ಯತೆ ನೀಡಿ, ಒಳ್ಳೆಯ ಲಾಭ ಗಳಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಸಮಗ್ರ ಕೃಷಿ ವ್ಯವಸ್ಥೆಯು ನಿರಂತರ ಆದಾಯ ತರುವ ಮೂಲಕ, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಇಂತಹ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು, ಇತರೆ ರೈತರಿಗೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಸಚಿವ ಎನ್. ಚಲುವರಾಯಸ್ವಾಮಿ ಮನವಿ ಮಾಡಿದರು.
ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಮಾತನಾಡಿ, ಉನ್ನತ ವ್ಯಾಸಂಗ ಮಾಡಿ, ಸರ್ಕಾರಿ ಉದ್ಯೋಗವನ್ನು ತೊರೆದು, ಕೃಷಿಯತ್ತ ಆಕರ್ಷಿತರಾಗಿ ಸಾಧನೆ ಮಾಡಿರುವ ರೈತ ಜ್ಞಾನೇಶ್ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ. ಇವರು ಕೃಷಿ, ಜೇನು ಸಾಕಾಣಿಕೆ, ಹೈನುಗಾರಿಕೆ, ವಿವಿಧ ತೋಟಗಾರಿಕೆ ಬೆಳೆಗಳು, ಬೆಳೆಗಳ ಮೌಲ್ಯವರ್ಧನೆ ಹಾಗೂ ಮಾಡಿಕೊಂಡಿರುವ ಮಾರುಕಟ್ಟೆ ವ್ಯವಸ್ಥೆ ನಿಜಕ್ಕೂ ಇತರರಿಗೆ ಅನುಕರಣೀಯವಾಗಿದೆ. ಕೃಷಿಯ ಸವಾಲು ಹಾಗೂ ಅದನ್ನು ಮೆಟ್ಟಿ ನಿಲ್ಲಲು ಸಾವಯವ ಕೃಷಿಗೆ ಇರುವ ಸಾಧ್ಯತೆಗಳ ಬಗ್ಗೆ ಗಮನ ಸೆಳೆದ ಸಚಿವರು, ರೈತರು ಸಾವಯವ ಕೃಷಿಯ ಲಾಭ ಪಡೆಯುವಂತೆ ಕರೆ ನೀಡಿದರು.
ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದ್ದು, ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಜಿಲ್ಲೆಯ ಎರಡು ತಾಲ್ಲೂಕುಗಳ ಕೈಬಿಟ್ಟು ಹೋಗಿರುವ ಬಗ್ಗೆ ಕೃಷಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಸೆಪ್ಟಂಬರ್ ಮೊದಲ ವಾರದಲ್ಲಿ ಬರ ಪರಿಸ್ಥಿತಿಯ ಬಗ್ಗೆ ರಾಜ್ಯದ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ವರದಿಯ ಆಧಾರದ ಮೇಲೆ, ಜಿಲ್ಲೆಯ ಎಲ್ಲ ತಾಲ್ಲೂಕುಗಳು ಕೂಡ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ ಎಂದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ರೈತ ಜ್ಞಾನೇಶ್ ಅವರು ತಮ್ಮ ಬೆಳೆಗೆ ತಾವೇ ಗರಿಷ್ಟ ಮಾರಾಟ ದರವನ್ನು ನಿಗದಿ ಮಾಡಿಕೊಂಡು ಮಾರಾಟ ಮಾಡುತ್ತಾರೆ, ಗುಣಮಟ್ಟಕ್ಕೆ ಆದ್ಯತೆ ನೀಡುವ ಇವರು, ಕೇವಲ 03.5 ಎಕರೆಯಲ್ಲಿ ವರ್ಷಕ್ಕೆ ಖರ್ಚನ್ನು ತೆಗೆದು, ಸುಮಾರು 10 ಲಕ್ಷ ರೂ. ವರೆಗೂ ಲಾಭ ಮಾಡಿಕೊಳ್ಳುತ್ತಿದ್ದಾರೆ, ಇದು ಇತರೆ ರೈತರಿಗೆ ಮಾದರಿಯಾಗಿದೆ ಎಂದರು.
ಚಳ್ಳಕೆರೆ ಶಾಸಕ ರಘುಮೂರ್ತಿ ಅವರು ಮಾತನಾಡಿ, ಸಮಗ್ರ ಕೃಷಿ ತೋಟ ಮಾಡಿ ನಿರಂತರ ಲಾಭ ಗಳಿಸುತ್ತಿರುವ ರೈತ ಜ್ಞಾನೇಶ್ ಅವರ ಸಾಧನೆ ಬಗ್ಗೆ ವ್ಯಾಪಕ ಪ್ರಚಾರ ಆಗಬೇಕು, ರೈತರಿಗೆ ಇದರ ಅರಿವು ಮೂಡಬೇಕು ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಕೃಷಿ ನಿರ್ದೇಶಕ ಡಾ. ಜಿ.ಟಿ. ಪುತ್ರ, ಜಂಟಿಕೃಷಿ ನಿರ್ದೇಶಕ ಮಂಜುನಾಥ್, ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ, ತಹಸಿಲ್ದಾರ್ ನಾಗವೇಣಿ, ಸೇರಿದಂತೆ ವಿವಿಧ ಅಧಿಕಾರಿಗಳು, ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೈತ ಜ್ಞಾನೇಶ ಅವರ ಸಮಗ್ರ ಕೃಷಿ ತೋಟದಲ್ಲಿ ಸುಮಾರು 45 ನಿಮಿಷಕ್ಕೂ ಅಧಿಕ ಸಮಯ ಕಳೆದ ಕೃಷಿ ಸಚಿವರು, ಇಲ್ಲಿ ನಿಂಬೆ, ಹಲಸು, ಪಪ್ಪಾಯ, ದಾಳಿಂಬೆ, ಕರಿಬೇವು, ನುಗ್ಗೆ, ದಾಳಿಂಬೆ, ಮಾವು, ಬಾಳೆ ಮುಂತಾದ ಬೆಳೆಗಳನ್ನು ಬೆಳೆದಿರುವುದನ್ನು ವೀಕ್ಷಿಸಿ, ಸಮಗ್ರ ಬೇಸಾಯ ಪದ್ಧತಿಯಿಂದ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ದೇಸಿ ತಳಿಯ ಹಸುಗಳನ್ನು ಸಾಕಿ ಹೈನುಗಾರಿಕೆ ಮಾಡಿರುವುದು, ಜೇನು ಸಾಕಾಣಿಕೆ, ಸಾವಯವ ಕೃಷಿ ಪದ್ಧತಿಯ ಬಗ್ಗೆಯೂ ವೀಕ್ಷಣೆ ಮಾಡಿದರು. ಸಮಾನ ಮನಸ್ಕ 25 ರಿಂದ 30 ರೈತರು ಒಂದೆಡೆ ಸೇರಿ, ಪ್ರತಿ ಭಾನುವಾರ ಸಾವಯವ ಸಂತೆ ಮಾಡುವುದು, ಗುಣಮಟ್ಟದ ಬೆಳೆಗಳನ್ನು ನಿಗದಿತ ದರದಲ್ಲೇ ಮಾರಾಟ ಮಾಡಿ, ಲಾಭ ಗಳಿಸುತ್ತಿರುವ ಬಗ್ಗೆಯೂ ರೈತ ಜ್ಞಾನೇಶ್ ಅವರಿಂದ ಮಾಹಿತಿ ಪಡೆದು, ಸಂತಸ ವ್ಯಕ್ತಪಡಿಸಿದರು. ಅಧಿಕಾರಿಗಳಿಗೂ ಇಂತಹ ತಾಕುಗಳನ್ನು ಗುರುತಿಸಿ ಇತರ ರೈತರಿಗೆ ಪರಿಚಯಿಸಬೇಕು, ರೈತರ ಯಶೋಗಾಥೆಗಳ ಬಗ್ಗೆ ಪ್ರಚಾರ ನೀಡಬೇಕು ಎಂದು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಸಚಿವರು ತೋಟದಲ್ಲಿ ಸಾಂಕೇತಿಕವಾಗಿ ಗಿಡವನ್ನು ನೆಟ್ಟು ನೀರೆರೆದರು.