ಚಿತ್ರದುರ್ಗ,(ಚಳ್ಳಕೆರೆ): ರಾಜ್ಯದ ಬಯಲು ಸೀಮೆ ಎಂದು ಪ್ರಚಲಿತಲಿರುವ ಚಳ್ಳಕೆರೆ ತಾಲೂಕು ಮುಂದಿನ ದಿನಗಳಲ್ಲಿ ಪರೀಶಿಲನೆ ನಡೆಸಿ ಬರಪೀಡಿತ ಘೋಷಣೆಗೆ ಸೂಚಿಸಲಾಗುವುದು, ಇನ್ನೂ ಎರಡು ತಾಲ್ಲೂಕುಗಳ ವಾಸ್ತವ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಪೀಡಿತ ತಾಲ್ಲೂಕುಗಳ ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರೈತರು ಯಾರು ಆತಂಕ ಪಡಬೇಡಿ ಎಂದು ಕೃಷಿ ಸಚಿವ ಚಲುವನಾರಾಯಣಸ್ವಾಮಿ ರೈತರಿಗೆ ಭರವಸೆ ನೀಡಿದರು.
ನಗರದ ಜುಂಜರುಗುAಟೆ ಗೇಟ್ ಸಮೀಪದ ರೈತರ ಹೊಲದಲ್ಲಿ ಬರ ಅಧ್ಯಯನ ನಡೆಸಿದ ಅವರು ಮಾತನಾಡಿದರು.
ರಾಜ್ಯ ಸರ್ಕಾರ ರೈತರ ಆಶೀರ್ವಾದದಿಂದ ರಚನೆಯಾಗಿದ್ದು, ಸರ್ಕಾರ ರೈತರ ಪರವಿದೆ. ರೈತರು ಸಲ್ಲಿಸಿರುವ ಮನವಿ, ಸಲಹೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಿ, ಸಮಸ್ಯೆಯನ್ನು ಸಂಪೂರ್ಣ ವಿಮರ್ಶೆ ಮಾಡಿ, ಶೇ.100ರಷ್ಟು ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಬೆಳೆವಿಮೆ ನೋಂದಣಿಗಾಗಿ ರೈತರು ರೂ.1265 ಕೋಟಿ ಹಣ ಪಾವತಿಸಿ ಬೆಳೆ ವಿಮಾ ಕಂತು ಹಣ ಪಾವತಿಸಿದ್ದಾರೆ. ರೂ.8661 ಕೋಟಿ ಹಣ ರೈತರಿಗೆ ಮರುಪಾವತಿಯಾಗಿದೆ. ಹೀಗಾಗಿ ಒಟ್ಟು 7396 ಕೋಟಿ ರೂ. ಹಣ ಬೆಳೆವಿಮೆಯಿಂದ ಸಿಕ್ಕಿದಂತಾಗಿದೆ. ಬೆಳೆವಿಮೆಯ ಮಾನದಂಡಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಗಳ ಜೊತೆ ಚರ್ಚಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು. ಜಿಲ್ಲಾಮಟ್ಟದ ಸಮಸ್ಯೆಗಳನ್ನು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಬಗೆಹರಿಸಲಿದ್ದಾರೆ ಎಂದರು.
ರಾಜ್ಯ ಸರ್ಕಾರವು ಆಗಸ್ಟ್ 1 ರಿಂದ ರೂ.3 ಲಕ್ಷದಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿದರಲ್ಲಿ ಸಾಲಸೌಲಭ್ಯ ನೀಡುತ್ತಿದ್ದು, ರೂ.15 ಲಕ್ಷದವರೆಗೂ ಶೇ.3ರ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು.
ರೈತರ ಕೃಷಿ ಪಂಪ್ಸೆಟ್ಗಳಿಗೆ ರಾತ್ರಿಯ ಬದಲು ಹಗಲು ವೇಳೆಯಲ್ಲಿ ವಿದ್ಯುತ್ ಸರಬರಾಜು ಪೂರೈಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
ಗೃಹ ಲಕ್ಷ್ಮೀ ಯೋಜನೆಗೆ ಆ. 30 ರಂದು ಚಾಲನೆ ನೀಡಲಾಗುತ್ತಿದೆ. ರಾಜ್ಯದ 01. 10 ಕೋಟಿ ಕುಟುಂಬಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ನೊಂದಣಿ ಮಾಡಿಕೊಂಡಿರುವ ಪ್ರತಿ ಕುಟುಂಬದ ಮನೆಯ ಯಜಮಾನಿಗೆ ಆ.30ರಂದು ರೂ.2000 ಹಣ ಜಮೆ ಮಾಡಲಾಗುತ್ತದೆ. ರೈತರ ಸಾಲಮನ್ನ ಮಾಡಿದ್ದರೂ ಕೂಡ ರೂ.10 ಸಾವಿರ ಕೋಟಿ ವ್ಯಯ ಮಾಡಲಾಗುತ್ತಿತ್ತು. ಆದರೆ ಗೃಹಲಕ್ಷ್ಮೀ ಯೋಜನೆಗೆ ರೂ.32 ಸಾವಿರ ಕೋಟಿ ಹಣವನ್ನು ಕುಟುಂಬಗಳಿಗೆ ಪಾವತಿಸಲಾಗುತ್ತಿದೆ ಎಂದರು.
ರೈತರ ಬೇಡಿಕೆಗಳು:
ಜಿಲ್ಲೆ ಸಂಪೂರ್ಣ ಬರಗಾಲಕ್ಕೆ ತುತ್ತಾಗಿದ್ದು, ಕೂಡಲೇ ರೈತರಿಗೆ ಬೆಳೆವಿಮೆ ಹಾಗೂ ಪರಿಹಾರವನ್ನು ರೈತರ ಖಾತೆಗೆ ಹಾಕಬೇಕು. ಪರಿಹಾರ ಮೊತ್ತ ಹೆಕ್ಟೆರ‍್ಗೆ ರೂ.25000/-ಗಳಿಗೆ ಹೆಚ್ಚಿಸಬೇಕು. ಜಾನುವಾರುಗಳಿಗೆ ಗೋಶಾಲೆ ತೆರೆಯಬೇಕು. ರೈತರ ಎಲ್ಲಾ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಈಚೆಗೆ ರೈತರು ಸಾವಯವ ಕೃಷಿಗೆ ಒಲವು ತೋರುತ್ತಿದ್ದು, ಹೇರಳವಾಗಿ ಸಾವಯವ ಗೊಬ್ಬರ, ಔಷಧಿಗಳು ಪರ್ಟಿಲೈಜರ್ ಅಂಗಡಿಗಳಲ್ಲಿ ಸಿಗಬೇಕು. ಕೃಷಿ ಇಲಾಖೆಯಿಂದ ಸೆಣಬು ಬೀಜ ವಿತರಿಸಬೇಕು. ರೈತರು ಖರೀದಿಸುವ ಉಪಕರಣಗಳಿಗೆ ಜಿಎಸ್ಟಿ ವಿಧಿಸಬಾರದು. ಪ್ರಸಕ್ತ ವರ್ಷದಿಂದ ಪಿವಿಸಿ ಪೈಪ್ ವಿತರಿಸಬೇಕು. ಎಲ್ಲಾ ಸಾಮಾನ್ಯ ವರ್ಗದ ರೈತರಿಗೂ ಸ್ಪ್ರಿಂಕ್ಲರ್ ಸೆಟ್ ವಿತರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಚಿತ್ರದುರ್ಗ ತಾಲ್ಲೂಕು ಘಟಕದಿಂದ ಕೃಷಿ ಸಚಿವರಿಗೆ ಮನವಿ ಮಾಡಲಾಯಿತು.
ಸಿರಿಧಾನ್ಯಗಳ ಪ್ರೋತ್ಸಾಹಧನ ಹೆಚ್ಚಳಕ್ಕೆ ಒತ್ತಾಯ:
ಪ್ರಸ್ತುತ ರೈತ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು ಹೆಕ್ಟೆರ‍್ಗೆ 10,000/- ರೂಗಳಿಂದ 20,000/-ರೂಗಳಿಗೆ ಹೆಚ್ಚಿಸಬೇಕು. ಕೊಬ್ಬರಿ ಖರೀದಿ ಕೇಂದ್ರವನ್ನು ಮರು ಸ್ಥಾಪಿಸಬೇಕು. ಬೆಂಬಲ ಬೆಲೆಯಡಿ ರಾಗಿ ಖರೀದಿಯಲ್ಲಿ ನಡೆದ ಹಗರಣದ ಬಗ್ಗೆ ಶೀಘ್ರ ತನಿಖೆ ನಡೆಸಿ ರೈತರ ಖಾತೆಗೆ ಹಣ ಜಮಾ ಮಾಡಬೇಕು. ಕೃಷಿ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಬೇಕು ಎಂದು ಹೊಸದುರ್ಗ ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೃಷಿ ಸಚಿವರಿಗೆ ಒತ್ತಾಯಿಸಿದರು.
ಆಂದ್ರ ಮಾದರಿ ಬೆಳೆವಿಮೆ ಜಾರಿ ತರಲಿ:
ಆಂದ್ರ ಪ್ರದೇಶದ ಮಾದರಿಯಲ್ಲಿ ಬೆಳೆವಿಮೆ ಯೋಜನೆ ರಾಜ್ಯದಲ್ಲಿ ಜಾರಿಗೆ ತರಬೇಕು ಎಂದು ರೈತ ಮುಖಂಡ ಕೆ.ಪಿ.ಭೂತಯ್ಯ ಮನವಿ ಮಾಡಿದರು.
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಮಾನದಂಡಗಳು ಅವೈಜ್ಞಾನಿಕವಾಗಿವೆ. ಜುಲೈ 31 ಬೆಳೆವಿಮೆ ಪಾವತಿಸಲು ಕೊನೆಯ ದಿನ ಎಂದು ವ್ಯಾಪಕ ಪ್ರಚಾರ ಮಾಡಿ ಬೆಳೆ ಕಟ್ಟಿಸಿಕೊಳ್ಳಲಾಗುತ್ತದೆ. ನಾವು ಸಾಲ ಮಾಡಿ ಬೆಳೆವಿಮೆ ಕಟ್ಟುತ್ತೇವೆ. ಆದರೆ ರೈತರಿಗೆ ಬೆಳೆವಿಮೆ ಪಾವತಿಸಲು ಯಾವುದೇ ದಿನಾಂಕ ನಿಗಧಿಪಡಿಸುವುದಿಲ್ಲ. 7 ವರ್ಷಗಳ ಸರಾಸರಿ ಗಣನೆಗೆ ತೆಗೆದಕೊಂಡು ಬೆಳೆವಿಮೆ ಪಾವತಿಮಾಡಲಾಗುತ್ತಿದೆ. ಇದನ್ನು ಆಯಾ ವರ್ಷವೇ ಗಣನೆಗೆ ತೆಗೆದುಕೊಳ್ಳಬೇಕು. ಆಂದ್ರ ಪ್ರದೇಶದ ಮಾದರಿ ಬೆಳೆವಿಮೆ ಜಾರಿಗೆ ತರಬೇಕು ಎಂದು ಕೃಷಿ ಸಚಿವರಿಗೆ ಮನವಿ ಮಾಡಿದರು.
ವಿ.ವಿ.ಸಾಗರ ಹಿನ್ನೀರಿನ ಪ್ರದೇಶದ ರೈತರಿಗೆ ಅನುಕೂಲ ಕಲ್ಪಿಸಬೇಕು:
ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು-ನಾಲ್ಕು ಹಳ್ಳಿಗಳು ವಿ.ವಿ.ಸಾಗರ ಹಿನ್ನೀರಿನಲ್ಲಿ ಮುಳುಗಿವೆ. ವರ್ಷದಿಂದ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಿಲ್ಲ. ನಿಜವಾದ ಭೂರಹಿತ ರೈತರಿಗೆ ಬದುಕಲು ಅವಕಾಶ ನೀಡಬೇಕು. 40 ರಿಂದ 50 ವರ್ಷಗಳ ಕಾಲ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ರೈತ ಮುಖಂಡ ಈಚಘಟ್ಟ ಸಿದ್ಧವೀರಪ್ಪ ಕೃಷಿ ಸಚಿವರಿಗೆ ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಅನುದಾನ ನೀಡಬೇಕು:
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಸಮಗ್ರ ನೀರಾವರಿ ಆಗಬೇಕು ಎಂಬ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆಯು ಕುಂಠಿತಗೊAಡಿದೆ. ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ರಾಷ್ಟ್ರೀಯ ಕಿಸಾನ್ ಸಂಘದ ಕೊಂಚೆ ಶಿವರುದ್ರಪ್ಪ ಮನವಿ ಮಾಡಿದರು.
ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ ವಿದ್ಯುತ್ ನೀಡಬೇಕು. ಯಾವುದೇ ಕಾರಣಕ್ಕೂ ರಾತ್ರಿ ವೇಳೆ ವಿದ್ಯುತ್ ನೀಡಬಾರದು ಎಂದು ಹೇಳಿದರು.
ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಗಿರೀಶ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ತಹಶೀಲ್ದಾರ್ ಡಾ.ನಾಗವೇಣಿ ಸೇರಿದಂತೆ ಕೃಷಿ ತಜ್ಞರು, ಪ್ರಗತಿಪರ ಕೃಷಿಕರು, ಕೃಷಿ ಸಾಧಕರು ಹಾಗೂ ರೈತರು ಇದ್ದರು.