ಚಿತ್ರದುರ್ಗ ಜೂನ್.9:
ಸರ್ವರಿಗೂ ನ್ಯಾಯ ಸಿಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯ ದೊರಕಬೇಕು ಎಂಬ ಧ್ಯೇಯದೊಂದಿಗೆ ಸರ್ವೋಚ್ಛ ನ್ಯಾಯಲಯ, ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯ ಮೇರೆಗೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲೆಯ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಜುಲೈ 8ರಂದು ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ಏರ್ಪಡಿಸಿದೆ. ಕಕ್ಷಿದಾರರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮನಗೂಳಿ ಪ್ರೇಮಾವತಿ ಎಂ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಲೋಕ ಅದಾಲತ್‍ನಲ್ಲಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇರುವ ಚೆಕ್ ಅಮಾನ್ಯೀಕರಣ, ಕ್ರಿಮಿನಲ್ ಕಾಂಪೌಡಬಲ್, ಆಸ್ತಿ ವಿಭಾಗ, ವಿಚ್ಛೇದನ ಪ್ರಕರಣ ಹೊರತು ಪಡಿಸಿ ಕೌಟುಂಬಿಕ ಪ್ರಕರಣ, ಅಪಘಾತ, ಕರಾರು, ಬ್ಯಾಂಕ್ ಸೇರಿದಂತೆ ವಿವಿಧ ರೀತಿಯ ಸಿವಿಲ್ ಹಾಗೂ ವ್ಯಾಜ್ಯ ಪೂರ್ವ ಸಾರ್ವಜನಿಕ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು. ಇದರಿಂದ ತ್ವರಿತಗತಿಯಲ್ಲಿ ನ್ಯಾಯ ದೊರಕುತ್ತದೆ. ಹಣ ಹಾಗೂ ಸಮಯ ಉಳಿತಾಯವಾಗುತ್ತದೆ. ಲೋಕ ಅದಾಲತ್ ವಿಶೇಷವೆಂದರೆ ರಾಜಿ ಆದ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ಸಂದರ್ಭದಲ್ಲಿ ಎರಡು ಕಡೆ ಕಕ್ಷಿದಾರರನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ರಾಜಿ ಸೂತ್ರಗಳನ್ನು ರೂಪಿಸಿ ಒಪ್ಪಿ ರಾಜಿ ಆಗುತ್ತಾರೆ. ಇದರಿಂದಾಗಿ ಎರಡು ಕಕ್ಷಿದಾರರಿಗೂ ಗೆಲುವಿನ ಸಂದರ್ಭವಾಗಿದೆ. ಸಾಮಾನ್ಯ ನ್ಯಾಯಾಲಯದಲ್ಲಿ ತೀರ್ಪು ನೀಡಿದ ಸಂದರ್ಭದಲ್ಲಿ ಒಬ್ಬರ ಪರವಾಗಿ ನ್ಯಾಯ ಬರುವುದರಿಂದ ಎದುರು ಕಕ್ಷಿದಾರರು ಮೇಲಿನ ನ್ಯಾಯಾಲಯಕ್ಕೆ ಮನವಿ ಹೋಗುವ ಸಂದರ್ಭವಿರುತ್ತದೆ. ಇದರಿಂದ ದ್ವೇಷವೂ ಬೆಳೆಯುತ್ತದೆ. ಇದನ್ನು ತಪ್ಪಿಸಿಕೊಳ್ಳಲು ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳೂವುದು ಅವಶ್ಯಕವಾಗಿದೆ. ಲೋಕ ಅದಾಲತ್‍ನಲ್ಲಿ ಪ್ರಕರಣ ಬಗೆಹರಿಸಿಕೊಂಡರೆ ನ್ಯಾಯಾಲಯಕ್ಕೆ ನೀಡಿದ ಶುಲ್ಕವನ್ನು ಸಹ ಹಿಂದಿರುಗಿಸಲಾಗುವುದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಮನಗೂಳಿ ಪ್ರೇಮಾವತಿ ಎಂ ಕೋರಿದರು.
ಜಿಲ್ಲೆಯಲ್ಲಿ 39948 ಪ್ರಕರಣಗಳು ಬಾಕಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಕಾಂಪೌಂಡಬಲ್ 471, ಚೆಕ್ ಬೌನ್ಸ್ 4764, ಬ್ಯಾಂಕ್ ಸಂಬಂಧಿಸಿದ 391, ಹಣ ವಸೂಲಾತಿಯ 1508, ಅಪಘಾತದ 2080, ನೌಕರರ ಪರಿಹಾರದ 104, ಕಾರ್ಮಿಕ ವ್ಯಾಜ್ಯದ 12, ಎಲೆಕ್ಟ್ರಿಸಿಟಿ 5, ಎಂ.ಎಂ.ಆರ್.ಡಿ ಕಾಯ್ದೆ 136, ವೈವಾಹಿಕ ಸಂಬಂಧದ 674, ಭೂ ಸ್ವಾಧೀನದ 851, ಆಸ್ತಿ ವಿಭಾಗದ 3431, ಸ್ಪೆಸಿಫಿಕ್ ಫರ್ಪಾರ್‍ಮನ್ಸ್ 749, ಜೀವನಾಂಶ ಕೋರಿಕೆಯ 525, ಮಹಿಳೆಯರ ಮೇಲಿನ ದೌರ್ಜನ್ಯದ 358, ಜನನ ಹಾಗೂ ಮರಣ ಸಂಬಂಧಿ 804, ಪಿಟಿ ಕೇಸ್ 2436, ಇತರೆ ಸಿವಿಲ್ 7726, ಇತರೆ ಜಾರಿಗೆ ಸಂಬಂಧಿಸಿ 2342, ಇತರೆ ಕ್ರಿಮಿನಲ್ ಕೇಸ್ 5443, ನಾನ್ ಕಾಂಪೌಂಡಬಲ್ 3955 ಹಾಗೂ ಇತರೆ ಪ್ರಕರಣಗಳು ಸೇರಿ 39948 ಪ್ರಕರಣಗಳು ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇವೆ. ಇದರಲ್ಲಿ ನಾನ್ ಕಾಂಪೌಂಡಬಲ್ 3955 ಪ್ರಕರಣಗಳನ್ನು ಹೊರತು ಪಡಿಸಿ ಎಲ್ಲಾ ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ತೆಗದುಕೊಳ್ಳಬಹುದು. ಸಾರ್ವಜನಿಕರು ರಾಜೀ ಮೂಲಕ ಹೆಚ್ಚು ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ, ನ್ಯಾಯಾಲಯದಲ್ಲಿ ನಾನ್ ಕಾಂಪೌಂಡಬಲ್ ಪ್ರಕರಣಗಳು ಸಹ ಇತ್ಯರ್ಥಗೊಳಿಸಲು ಅನುಕೂಲವಾಗತ್ತದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಮನಗುಳಿ ಪ್ರೇಮಾವತಿ ಎಂ ತಿಳಿಸಿದರು.
ಮಧ್ಯಸ್ಥಿಕೆಯಿಂದ ಪ್ರಕರಣಗಳು ಇತ್ಯರ್ಥಗೊಳಿಸಲು ನ್ಯಾಯಾಲಯದಿಂದ ಹೆಚ್ಚು ಪ್ರಯತ್ನ ಮಾಡಲಾಗುತ್ತಿದೆ. ಆದರೂ ಕಕ್ಷಿದಾರರು ಮಧ್ಯಸ್ಥಿಕೆಗೆ ಆಸಕ್ತಿ ತೋರುತ್ತಿಲ್ಲ. ಚೆಕ್‍ಗಳನ್ನು ಪಡೆದು ಸಾಲ ನೀಡುವ ಪ್ರಕರಣಗಳಲ್ಲಿ ಸಾಲದ ಮೊತ್ತದ ಯಾವುದೇ ರೀತಿಯ ದಾಖಲೆಗಳು ಇರುವುದಿಲ್ಲ. ಸಾಲ ಪಡೆದುಕೊಂಡವರು ಹಾಗೂ ನೀಡಿದವರು ಸಹ ಸರಿಯಾದ ಮೊತ್ತ ಹೇಳದೆ ಪ್ರಕರಣಗಳನ್ನು ನ್ಯಾಯಲಯದಲ್ಲಿ ಕೂಡ ಇತ್ಯರ್ಥವಾಗಲು ತೊಂದರೆಯಾಗುವುದು. ಜಿಲ್ಲೆಯಲ್ಲಿನ ಬ್ಯಾಂಕ್‍ಗಳ ವ್ಯವಸ್ಥಾಪಕರ ಸಭೆಯನ್ನು ನಡೆಸಲಾಗಿದೆ. ಜೂನ್ 27 ರಂದು ಕೆನರಾ ಬ್ಯಾಂಕ್ ವತಿಯಿಂದಲೂ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕಾಗಿ ವಿಶೇಷ ಅಭಿಯಾನ ಕಾರ್ಯಕ್ರಮ ನಡೆಸಲು ಸಿದ್ದತೆ ನಡೆಸಲಾಗಿದೆ. ಇದೇ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರು ಸಹ ವಿಶೇಷ ಅಭಿಯಾನ ನಡೆಸಲು ಮುಂದೆ ಬಂದಿದ್ದಾರೆ. ಈ ಅವಕಾಶಗಳನ್ನು ಕಕ್ಷಿದಾರರು ಬಳಸಿಕೊಳ್ಳಬೇಕು. ಇನ್ನೂ ಹೆಣ್ಣುಮಕ್ಕಳಿಗೆ ಆಸ್ತಿ ಪಾಲಿನ ವಿಚಾರದಲ್ಲಿ ಸರ್ವೊಚ್ಛ ನ್ಯಾಯಾಲಯ ತನ್ನ ತೀರ್ಪು ನೀಡಿದೆ. ಇದನ್ನು ಆಧಾರಿಸಿ ಅನೇಕ ಪ್ರಕರಣಗಳಲ್ಲಿ ಕಕ್ಷಿದಾರಿಗೆ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿ ಹೇಳಲಾಗುತ್ತದೆ. ರೈತರು ಬ್ಯಾಂಕುಗಳಿಂದ ಪಡೆದ ಸಾಲ ಪ್ರಕರಣಗಳಲ್ಲಿ ಕೂಡ ರಾಜೀ ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಕಕ್ಷಿದಾರರಿಗೆ ಸಾಕಷ್ಟು ಅವಕಾಶ ನೀಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಇದ್ದರು.

Namma Challakere Local News
error: Content is protected !!