ಯೋಗಿಕ ದೃಷ್ಟಿ ಸುಧಾರಣೆಯಾದರೆ ಇಡೀ ಜಗತ್ತು ಸುಧಾರಿಸುತ್ತದೆ ಎಂದು ಜೇವರ್ಗಿಯ ಮರುಳ ಶಂಕರ ದೇವರ ಗುರುಪೀಠದ ಅಧ್ಯಕ್ಷರಾದ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು ಹೇಳಿದರು.
ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠವು ಮನೆ ಮನೆಗೆ ಚಿಂತನ ನಿತ್ಯಕಲ್ಯಾಣ ಕಾರ್ಯಕ್ರಮವು ಸಿದ್ದಾಪುರದ ಸಾಯಿಬಾಬಾ ಸಭಾಂಗಣದಲ್ಲಿ ನಡೆದ ಮೂರನೇ ದಿನದ ಚಿಂತನ ಘೋಷ್ಠಿಯಲ್ಲಿ ಮಾತನಾಡಿದ ಅವರು ಬಸವಣ್ಣನವರ ಕಾಲದಲ್ಲಿ ಅನೇಕರು ಸಂತ ಮಹಾಂತರು ಬಂದರು. ಬಸವಣ್ಣನವರು ಸರಳವಾಗಿ ಇಷ್ಟಲಿಂಗದ ಮೂಲಕ ಜನರಿಗೆ ಯೋಗಿಕ ದೃಷ್ಟಿಯನ್ನು ಕೊಟ್ಟರು. ಅದೇ ಕಾಲದಲ್ಲಿ ಇದ್ದ ಶರಣೆ ಸತ್ಯಕ್ಕನಿಗೂ ಯೋಗಿಕ ದೃಷ್ಟಿ ಇತ್ತು. ಇನ್ನೊಬ್ಬರ ಹಂಗಿನಲ್ಲಿ ಬೆಳಯಬಾರದು ಎಂದು ಬಸವಣ್ಣನವರು ನನಗೆ ಹೇಳಿಕೊಟ್ಟಿದ್ದಾರೆ ಎಂದು ಸತ್ಯಕ್ಕ ಹೇಳುತ್ತಿದ್ದರು. ಬಸವಾದಿ ಪ್ರಮಥರು ಯೋಗಿಕ ದೃಷ್ಟಿಯನ್ನು ಸಾಕಾರಗೊಳಿಸಿಕೊಂಡವರು ಮನ್ಯಷ್ಯ ಪರಿವರ್ತನೆಯಾಗಬೇಕು ಎಂದಾಗ ಮಾತ್ರ ಯೋಗಿಕ ದೃಷ್ಟಿಯನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.
ನೇತೃತ್ವ ವಹಿಸಿ ಮಾತನಾಡಿದ ಶ್ರೀ ಬಸವಪ್ರಭು ಸ್ವಾಮಿಗಳು ನಮಗೆ ಆರೋಗ್ಯ ನೆಮ್ಮದಿ ಬೇಕೆಂದರೆ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು. ಬಸವಣ್ಣನವರು ದೇವರ ಜೊತೆ ಮಾತನಾಡಲು ಇಷ್ಟಲಿಂಗವನ್ನು ಕೊಟ್ಟಿದ್ದಾರೆ. ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ನಮಗೆ ಮುಖ್ಯ. ದೇಹ ಮತ್ತು ಮನಸ್ಸು ಪರಮಾತ್ಮನಲ್ಲಿ ಲೀನವಾಗಬೇಕು. ಸಾಮರಸ್ಯದ ಬದುಕೇ ನಿಜವಾದ ಯೋಗ. ಯೋಗ ಮಾಡುವವರ ಬುದ್ಧಿ ಶುದ್ಧಿಯಾಗುತ್ತದೆ ಎಂದು ಹೇಳಿದರು.
ಯೋಗಿಕ ದೃಷ್ಟಿ ವಿಷಯ ಚಿಂತನೆ ಮಾಡಿದ ಶಿಕ್ಷಕರಾದ ಪಿ.ಟಿ. ಉಮೇಶ್ ಕರ್ಮಯೋಗಿಗಳು ಎಂದರೆ ರೈತರು, ನಿತ್ಯ ದಾಸೋಹಕ್ಕೆ ಪ್ರಯತ್ನ ಪಡುತ್ತಿರುವವರು ಅವರು. ಅನೇಕ ಬಾರಿ ರೈತರು ನಿರ್ಲಿಪ್ತ ಜೀವನ ಸಾಗಿಸುತ್ತಿದ್ದಾರೆ. ಇಂದು ಯುವಕರಲ್ಲಿ ಅಂತಹ ಗುಣಗಳು ಕಾಣೆಯಾಗುತ್ತಿವೆ. ಮಕ್ಕಳು ಶೋಭೆಗೆ ಒಳಗಾಗುತ್ತಿದ್ದಾರೆ. ಎಲ್ಲಿ ಯೋಗ್ಯತೆ ಇರುತ್ತದೆಯೋ ಅಲ್ಲಿ ಯೋಗಿಕ ದೃಷ್ಟಿ ಇರುತ್ತದೆ. ನಮಗೆ ಮಾನಸಿಕ ಸ್ಥೆöÊರ್ಯ ಬೇಕಾಗುತ್ತದೆ. ಇಂದಿನ ಜನ ಪ್ರೀತಿ ವಾತ್ಸಲ್ಯದಿಂದ ದೂರವಾಗುತ್ತಿದ್ದಾರೆ. ನಾವು ವ್ಯಕ್ತಿತ್ವ ವಿಕಸನದ ಕಡೆಗೆ ಗಮನ ಕೊಡಬೇಕು. ಇಂದು ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ವಿಚಾರಗಳು ಅರಳಬೇಕಿದೆ. ದಶರಥಯ್ಯ, ಬುದ್ಧ, ಬಸವಣ್ಣ ಮೊದಲಾದವರು ನಮಗೆ ಆದರ್ಶವಾಗಬೇಕು. ಅಲ್ಲಮಪ್ರಭು, ಚನ್ನಬಸವಣ್ಣ, ಅಕ್ಕಮಹಾದೇವಿ ಮೊದಲಾದವರಲ್ಲಿ ಇದ್ದ ಯೋಗಿಕ ದೃಷ್ಟಿ ಅಸಾಧರಣವಾದುದು, ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸಬೇಕು ಎಂದರು.
ಶ್ರೀಮತಿ ಚೈತ್ರ ಸುಧೀರ್‌ರವರು ದಾಸೋಹ ವ್ಯವಸ್ಥೆ ಮಾಡಿದರು. ಪಿ.ಟಿ. ಜ್ಞಾನಮೂರ್ತಿ, ಆರ್. ಲಿಂಗರಾಜು, ವೀರೇಂದ್ರಕುಮಾರ್, ಶ್ರೀಮತಿ ಸ್ಮಿತ ಮೊದಲಾದವರು ಇದ್ದರು. ಬಸವಲೋಕದ ಅರುಣಕುಮಾರ್‌ರವರಿಂದ ವಚನ ಪ್ರಾರ್ಥನೆ ನಡೆಯಿತು. ಶ್ರೀಮತಿ ಅನಿತ ಎಸ್. ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.