ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.26:
ಮಾದಕ ವ್ಯಸನಗಳ ಸೇವೆಯಿಂದ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರಲಿದೆ ಎಂದು ಡಾ.ಚಂದ್ರಶೇಖರ್ ಕಂಬಳಿಮಠ್ ಹೇಳಿದರು.
ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಜಿಲ್ಲಾ ಅಬಕಾರಿ ಇಲಾಖೆ, ಜಿಲ್ಲಾ ಕಾರಾಗೃಹ, ಆರೋಗ್ಯ ಇಲಾಖೆಯ ಮಾನಸಿಕ ರೋಗ ವಿಭಾಗ, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಶಾಖೆ, ಪ್ರಜಾಸೇವಾ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ-2023ರ ಪ್ರಯುಕ್ತ ಕಾರಾಗೃಹ ಬಂಧಿನಿವಾಸಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವ್ಯಸನದಿಂದ ಮನುಷ್ಯನ ಇಡೀ ದೇಹವನ್ನು ಆವರಿಸಿ, ನಿತ್ರಾಣ, ನರದೌರ್ಬಲ್ಯ, ಮೆದುಳಿಗೆ ಹಾನಿ, ಶ್ವಾಸಕೋಶ, ಯಕೃತ್ತು ಎಲ್ಲವನ್ನೂ ನುಂಗಿ ನೊಣೆಯುತ್ತದೆ. ಲೈಂಗಿಕ ದೌರ್ಬಲ್ಯ ಸಹ ಉಂಟಾಗುವ ಸಾಧ್ಯತೆಯಿದೆ. ಆಧುನೀಕರಣದ ಭರಾಟೆಯಲ್ಲಿ ಕಿಟ್ಟಿ ಪಾರ್ಟಿಗಳೆಂಬ ಮೋಹದಿಂದ ಮಹಿಳೆಯರೂ ಈಗ ಈ ವ್ಯಸನಕ್ಕೆ ಗುರಿಯಾಗುತ್ತಿದ್ದಾರೆ. ಮೊದಲಿಗೆ ಶೋಕಿಗಾಗಿ ಪ್ರಾರಂಭವಾಗುವ ಈ ಅಭ್ಯಾಸ ಕ್ರಮೇಣ ಚಟವಾಗಿ ಬದಲಾಗುತ್ತದೆ. ಮಹಿಳೆಯರು ಈ ದುಶ್ಚಟಗಳಿಗೆ ಬೀಳುವುದರಿಂದ ಅವರಿಗೆ ಭವಿಷ್ಯದಲ್ಲಿ ಹುಟ್ಟುವ ಮಕ್ಕಳಿಗೆ ತೊಂದರೆಯಾಗಲಿದೆ ಎಂದರು.
ಅಬಕಾರಿ ನಿರೀಕ್ಷಕರಾದ ಶೇಕ್ ಇಮ್ರಾನ್ ಮಾತನಾಡಿ, ಜೂನ್ 26 ರಂದು ‘ಅಂತರಾಷ್ಟ್ರೀಯ ಮಾದಕ ದೃವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಮಾದಕವಸ್ತುಗಳ ವಿರೋಧಿ ದಿನ ಅಂದರೆ ಅದನ್ನು ವಿರೋಧಿಸುವುದು, ಆ ನಿಟ್ಟಿನಲ್ಲಿ ನಾವು ಏನು ಮಾಡಬಹುದೆಂಬ ಚಿಂತನ-ಮಂಥನವನ್ನು ನಾವು ಈ ಸಮಯದಲ್ಲಿ ಮಾಡಲೇ ಬೇಕಾಗಿದೆ. ಇದಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.
ಕುಡಿತ, ಪಾನ್ ಪರಾಗ್, ಗಾಂಜಾ, ಅಫೀಮು ಮತ್ತು ಕೆಲವು ಮತ್ತು ತರಿಸುವ ಮಾತ್ರೆಗಳು ಇತ್ಯಾದಿಗಳ ಅಭ್ಯಾಸದ ದುಷ್ಪರಿಣಾಮಗಳನ್ನು ಕಣ್ಣಾರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡಿರುತ್ತೇವೆ. ಅವರ ಮನೆಯವರು ಕಷ್ಟ ಪಡುವುದನ್ನು ನೋಡುತ್ತಿರುತ್ತೇವೆ. ಇದಕ್ಕೆ ಸಾಧ್ಯವಾದಷ್ಟು ವ್ಯಸನಿಗಳ ಮನಸ್ಸು ಪರಿವರ್ತನೆ ಮಾಡುವುದೊಂದೇ ದಾರಿ. ಯಾವುದೇ ವ್ಯಕ್ತಿ ಡ್ರಗ್ಸ್ ಅಥವಾ ಮಾದಕ ದ್ರವ್ಯದ ದಾಸನಾದರೆ ಅದರಿಂದ ಹೊರಗೆ ಬರಲು ಸಮಾಜವೂ ಅವನಿಗೆ ಸಹಾಯ ಮಾಡಬೇಕು. ಸಮಾಜದಿಂದ ತಿರಸ್ಕøತನಾದ ವ್ಯಕ್ತಿ ಇನ್ನಷ್ಟು ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ವ್ಯಕ್ತಿಯೊಬ್ಬರು ಡ್ರಗ್ಸ್ ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಡ್ರಗ್ ಅಡಿಕ್ಷನ್ ಎನ್ನಬಹುದು. ಡ್ರಗ್ಸ್ ಇದ್ದರೆ ಮಾತ್ರ ನನ್ನಿಂದ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ವ್ಯಸನಿಗಳು ಭಾವಿಸುತ್ತಾರೆ. ಇದಕ್ಕಾಗಿ ಸದಾ ಹಾತೊರೆಯುತ್ತಾರೆ. ಡ್ರಗ್ಸ್ ದೊರಕದೆ ಇದ್ದರೆ ವಿಲವಿಲ ಒದ್ದಾಡುತ್ತಾರೆ. ಡ್ರಗ್ಸ್ ಸೇವಿಸಿದ ಸಮಯದಲ್ಲಿ ಮನಸ್ಸಿನ ಹತೋಟಿ ಮೀರಿ ಕೆಟ್ಟ ಕೆಲಸಗಳನ್ನು, ಸಮಾಜಘಾತುಕ ಕೆಲಸಗಳನ್ನು ಮಾಡಬಹುದು. ಉಲ್ಲಾಸ ನೀಡುವಂತೆ ಕಾಣುವ ಇಂತಹ ಚಟಗಳ ಅಮಲಿನಿಂದ ಮಾಡಿದ ತಪ್ಪುಗಳಿಂದ ಜೀವನಪೂರ್ತಿ ಜೈಲಿನಲ್ಲಿರಬೇಕಾಗಬಹುದು ಅಥವಾ ಮರಣದಂಡನೆಗೂ ಗುರಿಯಾಗಬೇಕಾಗಬಹುದು ಎಂದರು.
ಮಾದಕ ದ್ರವ್ಯ ಸೇವನೆಯಿಂದ ನಡುಗುವಿಕೆ, ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು, ಮೂರ್ಛೆ ಹೋಗುವುದು, ತೂಕದಲ್ಲಿ ಏರಿಳಿತ, ಸಾಮಾಜಿಕವಾಗಿ ಕಡೆಗಣಿಸಲ್ಪಡುವುದು, ಅತಿಯಾದ ಅಥವಾ ಅತಿರೇಕದ ಚಟುವಟಿಕೆಗಳು, ಹೆದರಿಕೆ ಅಥವಾ ತಳಮಳ, ಆತಂಕ ಮತ್ತು ಮತಿವಿಕಲ್ಪ ಇತ್ಯಾದಿ ಹಲವು ಕೆಟ್ಟ ಪರಿಣಾಮಗಳು ಉಂಟಾಗುತ್ತವೆ.ಯುವ ಪೀಳಿಗೆ ಯಲ್ಲಿ ಮಾದಕ ವ್ಯಸನಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ ಒಳ್ಳೆಯ ಪ್ರಜೆಗಳಾಗಿ ಬಾಳಬೇಕು ಎಂದರು.
ಜಿಲ್ಲಾ ಕಾರ್ಯಗೃಹದ ಬಂಧಿ ನಿವಾಸಿಗಳಿಗೆ ಮಾದಕ ವಸ್ತುಗಳ ಸೇವನೆ, ಸಂಗ್ರಹಣೆ ಮತ್ತು ಅಕ್ರಮ ಸಾಗಾಣಿಕೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅಬಕಾರಿ ನಿರೀಕ್ಷಕ ಅರುಣ ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹದ ಜೈಲರ್ ಶ್ರೀಮಂತಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಜಹರ್ ಉಲ್ಲಾ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷರಾದ ಅರುಣ್ ಕುಮಾರ್, ಶ್ರೀನಿವಾಸ್ ಮಳಲಿ, ಅಬಕಾರಿ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತು ಕಾರಾಗೃಹದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.