ಹೈದೆಯರ ಆರಾಧ್ಯ ದೈವವೆಂದೆ ಪ್ರಸಿದ್ದ ಪಡೆದ ಗೌರಿ ದೇವಿ ಜಾತ್ರೆ
ಅದ್ದೂರಿಯಾಗಿ ತೆರೆ ಕಂಡ ಗೌರಮ್ಮ ದೇವಿ
ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಹೈದೆಯರ ಆರಾಧ್ಯ ದೈವವೆಂದೆ ಪ್ರಸಿದ್ದ ಪಡೆದ ಗೌರಿ ದೇವಿ ಜಾತ್ರೆ ನವೆಂಬರ್ ತಿಂಗಳಲ್ಲಿ ನಡೆಯುವ ಈ ಜಾತ್ರೆಗೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ಭರ್ಜರಿಯಾಗಿ ಕಳೆಕಟ್ಟಿದೆ. ತಾಲೂಕಿನ ದೊಡ್ಡ ಉಳ್ಳಾರ್ತಿಯಲ್ಲಿ ಗೌರಿದೇವಿ ಜಾತ್ರೆ ಪ್ರತಿವರ್ಷ ನವೆಂಬರ್ ತಿಂಗಳನಲ್ಲಿ ನಡೆಯುವುದು ವಾಡಿಕೆಯಂತೆ ನವಂಬರ್ 8ರಂದು ಪ್ರಾರಂಭವಾದ ಜಾತ್ರೆ ಮೂರು ದಿನಗಳ ಕಾಲ ಅದ್ದೂರಿಯಾಗಿ ತೆರೆ ಕಂಡಿದೆ.
ಜಾತ್ರೆಯ ವಿಶೇಷ :
ಗೌರಿದೇವಿ ಜಾತ್ರೆ ಮೂಲತಃ ಹೆಣ್ಣು ಮಕ್ಕಳ ಹಬ್ಬ. ದೇವಿ ಪಾಜಾ ಕೈಂಕರ್ಯ ನಡೆಸುವವರೆಲ್ಲ ಒಪ್ಪತ್ತು(ಉಪವಾಸ ವ್ರತ)ಇದ್ದು ಊಟ ಮಾಡಬೇಕು. ಮೋಗಲಹಳ್ಳಿ ಗ್ರಾಮದ ಪೂಜರಿಗಳು ತಣ್ಣೀರಿನಲ್ಲಿ ಸ್ನಾನ ಮಾಡಿ ಉಪವಾಸವಿದ್ದು, ಗೋಧಿ, ಉದ್ದು, ಕಡಲೆಹಿಟ್ಟು ಹಾಗೂ ಅರಿಸಿಣ ಪುಡಿಯನ್ನು ಹಾಲಿನೊಂದಿಗೆ ಬೇರಸಿ ಆ ಮಿಶ್ರಣವನ್ನು ನೋಡದೆ ಬೆನ್ನ ಹಿಂದೆ ಕೈ ಇಟ್ಟುಕೊಂಡು ಸುಮಾರು ಒಂದೂವರೆ ಅಡಿ ಎತ್ತರದ ಗೌರಿದೇವಿ ಮೂರ್ತಿಯನ್ನು ತಯಾರಿಸಿ ಹೊಸ ಮೊರದ ಮೇಲೆ ಹಲಂಕರಿಸುತ್ತಾರೆ. ಗ್ರಾಮದ ಪ್ರತಿ ಮನೆಯಲ್ಲೂ ಭಕ್ತರು ದೇವಿಗೆ ವಿಶೇಷ ಹರಕೆಗಳನ್ನು ಅರ್ಪಿಸುತ್ತಾರೆ.
ಹೆಸರಿನ ವಿಶೇಷತೆ :
ಈ ದೇವಿಯನ್ನು ಮೊದಲಿನಿಂದಲು ಗಂಗಮ್ಮ, ಗಂಗಿ, ಗೌರಿ, ಗೌರಮ್ಮ, ಎಂದು ಪ್ರಚಲಿತವಾಗಿದ್ದಾಳೆ. ಸುತ್ತಲಿನ ಹಲವು ಗ್ರಾಮಗಳಲ್ಲಿ ಈ ಹೆಸರಿನ ಹೆಣ್ಣು ಮಕ್ಕಳೆ ಜಾಸ್ತಿ ಇದ್ದಾರೆ.
ಇಷ್ಠ ಸಿದ್ದಿಗಾಗಿ ಹರಕೆ:-
ಕಂಕಣ ಭಾಗ್ಯ ಕೂಡಿ ಬರಲು, ಉತ್ತಮ ವರ ಸಿಗಲೆಂದು ಯುವತಿಯರು ದಿಂಡು ಉರುಳು ಹಾಗೂ ಆರತಿ ಹಿಡಿಯುವ ಮೂಲಕ ಹರಕೆ ತೀರಿಸಿದರೆ. ಮಕ್ಕಳಿಲ್ಲದವರು ಮಕ್ಕಳ ಫಲ ದೊರೆಯಲಿ ಎಂದು ಹೂವಿನ ತೊಟ್ಟಿಲು ಹರಕೆ ತೀರಿಸುತ್ತಾರೆ. ದೇವಿಗೆ ಹರಕೆ ಮತ್ತು ಆರತಿ ಹಿಡಿಯುವ ಮಹಿಳೆಯರೆಲ್ಲರೂ ಉಪವಾಸ ವ್ರತ, ಪೂಜೆ ಸಲ್ಲಿಸುತ್ತಾರೆ.
ಗ್ರಾಮದ ಹೆಣ್ಣು ಮಕ್ಕಳು ವಿವಿಧ ಬಣ್ಣದ ಸೀರೆಗಳನ್ನುಟ್ಟು, ತಟ್ಟೆಯಲ್ಲಿ ಎಲೆ, ಅಡಕೆ, ಹಾಗೂ ಲವಂಗ ಇಟ್ಟುಕೊಂಡು ಗೌರಿದೇವಿಯ ಜಾನಪದ ಹಾಡು ಹೇಳುತ್ತಾ, ಜಾತ್ರೆಗೆ ಬಂದ ನೆಂಟರು ಹಾಗೂ ಬೇರೆ ಊರಿಗೆ ಹೋಗುವ ಅತಿಥಿಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಗೌರಿದೇವಿಗೆ ಮುಡುಪು ವಸೂಲಿ ಮಾಡುತ್ತಾರೆ.
ಗೌರಿದೇವಿ ಉತ್ಸವಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಂದಿಕೋಲು, ಕೋಲಾಟ, ಭಜನೆ ಜಾನಪದ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ಕೆರೆಗೆ ಬಿಡುತ್ತಾರೆ.
ಈ ಜಾತ್ರೆಯ ಮತ್ತೊಂದು ವಿಶೇಷವೆಂದರೆ ಹೆಣ್ಣು ದೇವತೆಯ ಜಾತ್ರೆಯಾದರು ಸಹ ಇಲ್ಲಿ ಯಾವುದೇ ಪ್ರಾಣಿಗಳನ್ನು ಬಲಿನೀಡುವುದಿಲ್ಲ, ಬದಲಿಗೆ ಹಣ್ಣು, ತರಕಾರಿ, ಮುಂತಾದ ಪದರ್ಥಗಳನ್ನು ದೇವಿಗೆ ಅರ್ಪಿಸುವುದು ವಾಡಿಕೆಯಾಗಿದೆ.
ಎಲ್ಲಾ ಊರುಗಳಲ್ಲಿ ಗೌರಿದೇವಿ ಪ್ರತಿಷ್ಠಪನೆ ಮಾಡಿ ಪೂಜಿಸುವುದು ಸಾಮಾನ್ಯ. ಆದರೆ ಜಿಲ್ಲೆಯ ಯಾವ ಭಾಗದಲ್ಲೂ ಇಷ್ಟು ದೊಡ್ಡದ ಜಾತ್ರೆಯಂತೆ ಆಚರಣೆ ಮಾಡುವುದಿಲ್ಲ. ಇಂತಹ ವಿಶಿಷ್ಠವಾದ ಗೌರಿ ಜಾತ್ರೆಯನ್ನು ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಕಾಣಲು ಸಾದ್ಯ. ಬಗೆ ಬಗೆಯ ಕಟ್ಟುನಿಟ್ಟಿನ ಆಚರಣೆಯೊಂದಿಗೆ ತುಂಬ ಅದ್ದುರಿಯಾಗಿ ನಡೆಸುತ್ತಾರೆ.
ಈ ಜಾತ್ರೆ ನೋಡಲು ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ ಹೆಣ್ಣು ಮಕ್ಕಳು ನೋಡಲೆಬೇಕಾದ ಜಾತ್ರೆ ಆಸಕ್ತಿ ಉಳ್ಳವರು ಈ ಗ್ರಾಮಕ್ಕೆ ಆಗಮಿಸಿ ಗೌರಿದೇವಿಯ ಜಾತ್ರೆಯ ಸೇವೆಯನ್ನು ಸವಿಯಬಹುದು. “ಗೌರಿ ಹಬ್ಬದಲ್ಲಿ ಹೆಣ್ಣು ತರಲು ಹೋಗಬಾರದು, ಎತ್ತಿನ ಹಬ್ಬದಲ್ಲಿ ಎತ್ತುಗಳನ್ನು ತರಲು . ಹೋಗಬಾರದು” ಎಂಬ ಗಾದೆ ಮಾತಿದೆ.
ಏಕೆಂದರೆ ಎಂತಹ ಬಡಕಲಾದ ಹಾಗೂ ರೋಗಗಳಿಂದ ನರಳುವ ದನ ಮತ್ತು ಕೂರೂಪಿ ಹೆಣ್ಣು ಮಕ್ಕಳೂ ಈ ಸಮಯದಲ್ಲಿ ಬಣ್ಣ ಬಣ್ಣದ ಬಟ್ಟೆಗಳೊಂದಿಗೆ ಶೃಂಗಾರ ಮಾಡಿಕೊಂಡು ಗಮನ ಸೆಳೆಯುತ್ತಾರೆ ಇಲ್ಲಿನ ಜಾತ್ರೆಗೆ ಜಿಲ್ಲೆ ಹಾಗೂ ನೆರೆಯ ರಾಜ್ಯದಿಂದಲೂ ಸಾವಿರಾರು ಭಕ್ತರು ಬಂದು ಗೌರಿದೇವಿಯ ದರ್ಶನ ಪಡೆಯುತ್ತಾರೆ. ಈ ಗ್ರಾಮದಲ್ಲಿ ಗೌರಿ ಜಾತ್ರೆ ಮುಗಿದ ನಂದರ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲೂ ಭಯ ಭಕ್ತಿಯಿಂದ ಗೌರಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಮಾರನೇ ದಿನವಾದ ಎತ್ತಿನ ಹಬ್ಬವನ್ನು ಸಹ ಮಾಡುತ್ತಾರೆ ಎನ್ನಲಾಗಿದೆ.
ಬಾಕ್ಸ್ ಮಾಡಿ :
1.ಗೌರಮ್ಮದೇವಿ ಹಿರಿಯೂರಿನ ತಾಲೂಕಿನಿಂದ ಬಂದವಳು ಎಂಬ ಪ್ರತೀತಿ ಇದೆ, ಇವರು ಮೊದಲಿಗೆ ರಾಗಿ ರಾಶಿಯಲ್ಲಿ ಬಂದು ಬ್ರಹ್ಮಣರ ಮನೆಯಲ್ಲಿ ಒಡೆವು ಎಂಬ ರಾಶಿಯಲ್ಲಿ (ಅಮ್ಮನ ಓಡೆವು) ಪ್ರತಿಸ್ಠಾಪಿಸಿದ್ದಾಳೆ, ಇಂದಿಗೂ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ, ಸತಿಪತಿ ಭಾಗ್ಯ ದೊರಕಿಸುವಳು ಎಂಬ ನಂಬಿಕೆ ಇದೆ, ಆದ್ದರಿಂದ ಭಕ್ತರು ಆರತಿ ಸೇವೆ, ಉರುಳು ಸೇವೆ ಇಂದಿಗೂ ಮಾಡುತ್ತಿದ್ದಾರೆ, ಸುತ್ತಲಿನ ಆಂಧ್ರದ ಗಡಿ ಭಾಗದ ಜನರು ಈ ದೇವಿಯ ಆರಾಧಕರು ಇದ್ದಾರೆ.
—ದೊಡ್ಡ ಉಳ್ಳಾರ್ತಿ ಕರಿಯಣ್ಣ, ಅಖಿಲ ಭಾರತ ಕಿಸಾನ್ ಸಭಾ ರಾಜ್ಯಾಧ್ಯಾಕ್ಷ.
2.ಧಾರ್ಮಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ವಿಶ್ವ ಶಾಂತಿ ಸಾರೋಣ ಎಂಬ ಮಾತಿನಂತೆ ಇಂದಿಗೂ ಮನುಷ್ಯನ ಮನಸ್ಸುನ್ನು ಹಿಡಿದಿಡುವ ಕೆಲಸ ಈ ದೇವಾಸ್ಥಾನಗಳಿಂದ ಮಾತ್ರ ಸಾಧ್ಯ ಅಂತಹ ಒಂದು ಮಹತ್ ಕಾರ್ಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಗೌರಿ ದೇವರಿಂದ ಮಾತ್ರ ಸಾಧ್ಯವಾಗಿದೆ, ಆದ್ದರಿಂದ ಈ ಭಾಗದ ಭಕ್ತರು ಮೂರು ದಿನಗಳ ಕಾಲ ಭಕ್ತಿಪೂರ್ವಕವಾದ ಭಾವನೆಯಿಂದ ಅರಕೆ, ಉಪವಾಸದಿಂದ ದೇವಿ ಕೃಪೆಗೆ ಪಾತ್ರರಾಗುತ್ತಾರೆ.—ಎನ್.ರಘುಮೂರ್ತಿ ತಹಶೀಲ್ದಾರ್ ಚಳ್ಳಕೆರೆ
ಫೋಟೋ: ಚಳ್ಳೆಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿರುವ ಶ್ರೀ ಗೌರಿದೇವಿಯ ದೇವಸ್ಥಾನ
1ಎ. ಗೌರಿದೇವಿಯ ವಿಗ್ರಹ.