ಚಿತ್ರದುರ್ಗ : ಜಿಲ್ಲೆಯಲ್ಲಿ ಈ ವರ್ಷ ಸಕಾಲದಲ್ಲಿ ಉತ್ತಮ ಮಳೆ ಬಾರದೆ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹಸಿರು ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಒಟ್ಟು 2.4 ಲಕ್ಷ ಹೆ. ಬೆಳೆ ಹಾನಿಗೀಡಾಗಿದೆ, ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಒಟ್ಟು 189.63 ಕೋಟಿ ರೂ. ಪರಿಹಾರ ಮೊತ್ತ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಭೀಕರ ಬರ ಪರಿಸ್ಥಿತಿಯ ಬಗ್ಗೆ ಅಂಕಿ-ಅಂಶ ಸಹಿತ ಮನವರಿಕೆ ಮಾಡಿಕೊಟ್ಟರು.

ಕೇಂದ್ರದ ಬರ ಅಧ್ಯಯನ ತಂಡ ತಾಲೂಕಿನ ರಾಮದುರ್ಗದ, ದೊರೆಯಗಳಹಟ್ಟಿ ರೈತರ ಹೊಲಗಳಿಗೆ ಶನಿವಾರದಂದು ಬೇಟಿ ನೀಡಿ ಜಿಲ್ಲೆಯ ಬರ ಪರಿಸ್ಥಿತಿಯಯನ್ನು ಮನವರಿಕೆ ಮಾಡಿಕೊಟ್ಟರು.

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ತಡವಾಗಿ ಆಗಮಿಸಿತು, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಬಂದ ಮಳೆಯಿಂದಾಗಿ ರೈತರು ಬೆಳೆ ಬಿತ್ತನೆ ಮಾಡಿದರು, ಜಿಲ್ಲೆಯಲ್ಲಿ ಒಟ್ಟಾರೆ ಶೇ. 94 ರಷ್ಟು ಬಿತ್ತನೆಯಾಗಿದೆ. ಆದರೆ ಆಗಸ್ಟ್ ತಿಂಗಳಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟು, ತೇವಾಂಶದ ಕೊರತೆ ಜಿಲ್ಲೆಯಾದ್ಯಂತ ಕಾಡಿತು. ಜೂನ್ ನಿಂದ ಆಗಸ್ಟ್ ವರೆಗೆ 174 ಮಿ.ಮೀ. ಬದಲಿಗೆ ಕೇವಲ 135 ಮಿ.ಮೀ. ಮಳೆ ಆಗಿದೆ, ಅದೂ ಕೂಡ ಪೈರಿಗೆ ಬೇಕಾದ ಸಮಯಕ್ಕೆ ಬರಲಿಲ್ಲ. ಹೀಗಾಗಿ ಜಿಲ್ಲೆಯ ಹೊಲಗಳಲ್ಲಿ ಬೆಳೆ ಮೇಲ್ನೋಟಕ್ಕೆ ಹಸಿರಾಗಿ ಕಾಣುತ್ತಿದ್ದರೂ, ಅವುಗಳಲ್ಲಿ ಯಾವುದೇ ಇಳುವರಿ ಬಂದಿಲ್ಲ, ಈರುಳ್ಳಿ ಬೆಳೆಯಲ್ಲಿ ಈರುಳ್ಳಿ ಗಡ್ಡೆಯೇ ರೂಪುಗೊಂಡದ ಸ್ಥಿತಿಯಲ್ಲಿ ಬೆಳೆ ಇದೆ.

ಇದರಿಂದಾಗಿ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ 2,35,507 ಹೆ. ನಷ್ಟು ಕೃಷಿ ಬೆಳೆ ಹಾನಿಯಾಗಿದ್ದು, ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ 185.56 ಕೋಟಿ ರೂ. ಹಾಗೂ 4790 ಹೆ. ತೊಟಗಾರಿಕೆ ಬೆಳೆ ಹಾನಿಯಾಗಿದ್ದು, ಮಾರ್ಗಸೂಚಿಯನ್ವಯ 4.08 ಕೋಟಿ ರೂ. ಸೇರಿದಂತೆ, ಒಟ್ಟಾರೆ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ 2,40,296 ಹೆ. ಬೆಳೆ ನಷ್ಟಕ್ಕಾಗಿ 189.63 ಕೋಟಿ ರೂ. ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮುಂಗಾರು ಹಂಗಾಮಿನಲ್ಲಿ 10.86 ಲಕ್ಷ ಮೆ.ಟನ್ ನಷ್ಟು ಮೇವು ಬೆಳೆಯಲಾಗುತ್ತಿತ್ತು, ಆದರೆ ಮಳೆಯ ಕೊರತೆ ಕಾರಣದಿಂದಾಗಿ ಕೇವಲ 3.71 ಲಕ್ಷ ಮೆ.ಟನ್ ನಷ್ಟು ಮಾತ್ರ ಮೇವು ಬೆಳೆಯಲಾಗಿದೆ, ಜಿಲ್ಲೆಗೆ ವರ್ಷಕ್ಕೆ ಜಾನುವಾರುಗಳಿಗಾಗಿ ಕನಿಷ್ಟ 10.59 ಲಕ್ಷ ಮೆ.ಟನ್ ನಷ್ಟು ಮೇವಿನ ಅಗತ್ಯತೆ ಇದೆ,

ಬರ ಪರಿಸ್ಥಿತಿಯಿಂದಾಗಿ ಮೇವಿಗೂ ಕೊರತೆ ಉಂಟಾಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ಗೋಶಾಲೆಗಳನ್ನು ತೆರೆಯಲು ಬೇಕಾದ ಸಿದ್ಧತೆ ಹಾಗೂ ಅಗತ್ಯವಿರುವ ಅನುದಾನದ ಬಗ್ಗೆಯೂ ವರದಿ ಸಲ್ಲಿಸಲಾಗಿದೆ. ಮಳೆಯ ಕೊರತೆ ಕಾರಣ ಈಗಾಗಲೆ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಕುಸಿತ ಉಂಟಾಗಿದೆ. ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿಕಾರ್ಮಿಕರಿಗೆ ನರೇಗಾ ಯೋಜನೆಯಡಿ ವರ್ಷಕ್ಕೆ ನೀಡುವ ಉದ್ಯೋಗದ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲಾಗಿದ್ದು, ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಉದ್ಯೋಗ ನೀಡಿ, ಕೂಲಿಕಾರ್ಮಿಕರ ಹಿತ ಕಾಯಲು ಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ 16 ವರ್ಷಗಳು ಸರ್ಕಾರದಿಂದ ಘೋಷಿತ ಬರವನ್ನು ಜಿಲ್ಲೆ ಅನುಭವಿಸಿದ್ದು, ರೈತರು ಸಂಕಷ್ಟದ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ ಎಂಬುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳಿಗೆ ಜಿಲ್ಲೆಯ ಬರ ಪರಿಸ್ಥಿತಿಯ ವಾಸ್ತವ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟರು.

ಜಿಲ್ಲೆಯ ಬರ ಅಧ್ಯಯನಕ್ಕಾಗಿ ಆಗಮಿಸಿದ ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ಎಂ.ಎನ್.ಸಿ.ಎಫ್.ಸಿ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ. ಶ್ರೀನಿವಾಸ ರೆಡ್ಡಿ. ಜಿಲ್ಲಾ ಪಂಚಾಯತ್ ಸಿಇಒ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್, ಜಂಟಿಕೃಷಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಉಪನಿರ್ದೇಶಕಿ ಸವಿತಾ, ತಹಶಿಲ್ದಾರರ ರೇಹಾನ್ ಪಾಷ, ಚಳ್ಳಕೆರೆ ಕೃಷಿ ಅಧಿಕಾರಿ ಜ.ಅಶೋಕ, ತೋಟಗಾರಿಕೆ ಅಧಿಕಾರಿ ಆರ್.ವಿರೂಪಾಕ್ಷಪ್ಪ, ಎಓ.ಜೀವನ್, ಹೇಮಂತ್ ನಾಯ್ಕ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!